ಬನ್ಯನ್, ಜಾನ್ 1628-88. ಇಂಗ್ಲಿಷ್ ಗದ್ಯಸಾಹಿತಿ. ಹೆಸರಾಂತ ಧಾರ್ಮಿಕ ಕೃತಿಗಳನ್ನು ರಚಿಸಿದ್ದಾನೆ. ತಂದೆ ಕಲಾಯಿ ಮಾಡಿ ಹೊಟ್ಟೆಹೊರೆಯುತ್ತಿದ್ದ ಒಬ್ಬ ಬಡವ. ಈತ ಪಾರ್ಲಿಮೆಂಟಿಗೂ ಅರಸನಿಗೂ ನಡೆಯುತ್ತಿದ್ದ ಅಂತರ್ ಯುದ್ಧದಲ್ಲಿ ಸೈನ್ಯಕ್ಕೆ ಸೇರಿದ. ಆಗ ಈತನ ವಯಸ್ಸು ಕೇವಲ 16. ಆಗಿನ ಕಾಲದಲ್ಲಿ ಧಾರ್ಮಿಕ ಬೋಧನೆ ಮಾಡಬೇಕಾದರೆ ಅಪ್ಪಣೆ ಪತ್ರವನ್ನು ಪಡೆಯಬೇಕಿತ್ತು. ಚರ್ಚ್ ಆಫ್ ಇಂಗ್ಲೆಂಡಿಗೆ ಸೇರಿದ ಕ್ರಿಶ್ಚಿಯನರ ಗುಂಪೊಂದರಿಂದ ಆಕರ್ಷಿತನಾಗಿ, ದೀಕ್ಷೆ ಪಡೆಯದಿದ್ದರೂ ಆಗಾಗ ಧರ್ಮೋಪದೇಶ ಮಾಡತೊಡಗಿದ. ಇದರಿಂದಾಗಿ 1660 ರಿಂದ ಹನ್ನೆರಡು ವರ್ಷಗಳ ಕಾಲ ಸೆರೆಯಲ್ಲಿದ್ದ. ಸೆರೆಗೆ ಹೋಗುವ ಮುನ್ನ ತನ್ನ ಜೀವನದೃಷ್ಟಿಯನ್ನು ವಿವರಿಸುವ ಗ್ರಂಥಗಳನ್ನು ರಚಿಸಿದ್ದ. ಈತ ಸೆರೆಮನೆ ವಾಸದ ಪೂರ್ವಾರ್ಧದಲ್ಲಿ ಒಂಬತ್ತು ಪುಸ್ತಕಗಳನ್ನು ಬರೆದ. ಪರಮಪಾಪಿಗಳಿಗೂ ಲಭ್ಯವಾಗುವ ಅತಿಶಯ ಅನುಗ್ರಹ (ಗ್ರೇಸ್ ಅಬೌಂಡಿಂಗ್ ಟು ದಿ ಚೀಫ್ ಆಫ್ ಸಿನ್ನರ್ಸ್) ಇವುಗಳಲ್ಲೊಂದು. ಇನ್ನೊಂದು ದಿ ಹೋಲಿ ಸಿಟಿ. ಈತನ ಮೇರುಕೃತಿಯಾದ ಪಿಲ್‍ಗ್ರಿಮ್ಸ್ ಪ್ರೊಗ್ರೆಸ್‍ನ ಮೊದಲ ಭಾಗ ಎರಡನೆಯ ಬಾರಿ ಆರು ತಿಂಗಳು ಸೆರೆಯಲ್ಲಿದ್ದಾಗ ರಚಿತವಾಯಿತು (1617). ಅದು ಪೂರ್ಣಗೊಂಡದ್ದು 1684ರಲ್ಲಿ, ಲೈಫ್ ಆಂಡ್ ಡೆತ್ ಆಫ್ ಮಿ. ಬ್ಯಾಡ್ಮನ್ (1680) ಎಂಬ ಕೃತಿ ಎರಡನೆಯ ಚಾಲ್ರ್ಸನ ಕಾಲದ ಜೀವನವನ್ನು ಚಿತ್ರಿಸುವ ಕೃತಿ. ದಿ ಹೋಲೀ ವಾರ್ (1682) ಎಂಬುದು ಪಾಪ ಮಾನವ ಹೃದಯವನ್ನು ಬಂಧಿಸುವ ವಿಷಯವನ್ನು ಕುರಿತುದಾಗಿದೆ. ದಿ ಹೆವನ್ಲಿ ಫುಟ್‍ಮನ್ (1698) ಅಂಥದೇ ಇನ್ನೊಂದು ಧಾರ್ಮಿಕ ಕೃತಿ.

	ತೀರ ಅಲ್ಪ ವಿದ್ಯಾಭ್ಯಾಸ ದೊರೆತ ಈತನ ಸಾಹಿತ್ಯ ಸೃಷ್ಟಿಗೆ ಬೈಬಲ್ಲಿನ ಶ್ರದ್ಧಾವಂತ ಅಭ್ಯಾಸವೇ ಪ್ರೇರಣೆ, ಆಧಾರ. ಇವನಲ್ಲಿ ಅಸಾಧಾರಣ ನೈತಿಕ ಶ್ರದ್ಧೆ ಸಹಜವಾದ ಪ್ರತಿಭೆಯೊಡನೆ ಬೆರೆತಿತ್ತು. ಅತಿ ಕಟ್ಟುನಿಟ್ಟಾದ ಜೀವನ ಮತ್ತು ಧರ್ಮಶ್ರದ್ಧೆಗಳ ಪ್ಯೂರಿಟನ್ ಪಂಗಡದ ಲಕ್ಷಣವಾದ ಮುಕ್ತಿಯ ಅನ್ವೇಷಣೆ, ನೈತಿಕ ಶ್ರದ್ಧೆ, ಭಕ್ತಿಯ ಉದ್ವೇಗ, ದೈವಾನುಗ್ರಹದಲ್ಲಿ ವಿಶ್ವಾಸ-ಇವೆಲ್ಲ ಇವನ ಕೃತಿಗಳಲ್ಲಿ ಸರಳವೂ ಸತ್ವಯುತವೂ ಆಗಿ ಅಭಿವೃಕ್ತಿ ಪಡೆದಿವೆ, ಇವನ ಶೈಲಿ ಬೈಬಲಿನ ಶೈಲಿಯಂತೆ ಸರಳ ಸುಂದರ, ಗಂಭೀರ ರಾಜಪ್ರಭುತ್ವದ ಪುನಸ್ಸ್ಥಾಪನೆಯ ಅನಂತರ ವಿಲಾಸಭೋಗಗಳಲ್ಲಿ ಆಸಕ್ತವಾಗಿದ್ದ. ರೆಸ್ಟೋರೇಷನ್ ಯುಗದಲ್ಲಿ (1660-1700) ಈತ ಬರೆದನಾದರೂ ಆ ಯುಗದ ನೈತಿಕ ಅನಾಸಕ್ತಿ ಬೌದ್ಧಿಕ ಶಕ್ತಿಯಲ್ಲಿ ವಿಶ್ವಾಸ, ಉಲ್ಲಾಸ ಇವುಗಳಿಗಿಂತ ಇವನ ರುಚಿ ಭಿನ್ನವಾದುದು. ಇಂಗ್ಲಿಷ್ ಭಾಷೆಯಲ್ಲಿನ ಮಹಾಗದ್ಯಸಾಹಿತಿಗಳಲ್ಲೆಲ್ಲ ಇವನದೇ ಅತಿ ಸರಳವೂ ನಿರಾಡಂಬರವೂ ಆದ ಶೈಲಿ. ಅಲಂಕೃತವೂ ದೀರ್ಘವಾದ ವಾಕ್ಯಗಳಿಂದ ತುಂಬಿದುದೂ ರಾಜಗಾಂಭೀರ್ಯದಿಂದ ಮೆರೆಯುವುದೂ ಆದ ಶೈಲಿಯಿಂದ ಇಂಗ್ಲಿಷ್ ಗದ್ಯಮೂರ್ತವೂ ಸರಳವೂ ಲಲಿತವೂ ಆದ ಶೈಲಿಯತ್ತ ತಿರುಗಿದುದಕ್ಕೆ ಬನ್ಯನ್ ಕಾರಣನೆಂದರೆ ತಪ್ಪಾಗಲಾರದು.

	ಪಿಲ್‍ಗ್ರಿಮ್ಸ್ ಪ್ರೊಗ್ರೆಸ್ ಅನ್ನು ಪ್ರಪಂಚದ ಮೇರುಕೃತಿಗಳಲ್ಲಿ ಒಂದೆಂದು ವಿಮರ್ಶಕರು ಪರಿಗಣಿಸಿದ್ದಾರೆ. ಅದರದು ಒಂದು ರೂಪಕ ಕಥೆ (ಆಲಿಗರಿ). ಕ್ರಿಶ್ಚನನೊಬ್ಬ ಕಷ್ಟದ ಬೀಡಿನಿಂದ ಸುಖದ ನಾಡಿಗೆ ಮಾಡಿದ ಪ್ರಯಾಣದ ವಿವರಗಳು ಇಲ್ಲಿವೆ. ನಿಜಜೀವನದ ಬಗ್ಗೆ ಕೃತಿಕಾರನಿಗೆ ಇರುವ ಕಳಕಳಿ, ಉದ್ದಕ್ಕೂ ಕಾಣುವ ಲಘು ಹಾಸ್ಯ. ಪಾತ್ರಸೃಷ್ಟಿಯಲ್ಲಿನ ನೈಜತೆ-ಇವು ಇಲ್ಲಿ ಗಮನಾರ್ಹ. ಇದು ಪ್ರಕಟವಾದ ಹತ್ತು ವರ್ಷಗಳಲ್ಲಿ ಒಂದು ಲಕ್ಷಪ್ರತಿಗಳು ಖರ್ಚಾದುವಂತೆ. ಇದನ್ನು ಒಂದು ನೂರಕ್ಕೂ ಹೆಚ್ಚಿನ ಭಾಷೆ ಉಪಭಾಷೆಗಳಲ್ಲೂ ಅನುವಾದಿಸಲಾಗಿದೆ. ಆದರೆ 1950ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದ ಮುಖಪತ್ರ ಕಲೆಹಾಕಿರುವ ಜನಾಭಿಪ್ರಾಯದಂತೆ ತುಂಬ ನೀರಸವಾದ 15 ಪುಸ್ತಕಗಳಲ್ಲಿ ಇದೂ ಒಂದು.:

	ಅನಾರ್ಥ (ಆಲಿಗರಿ)ಯ ಶ್ರೇಷ್ಠ ನಿದರ್ಶನ `ದಿ ಪಿಟ್‍ಗ್ರಿವರ್ಸ್ ಪ್ರೋಗ್ರೆಸ್ ಇಲ್ಲಿ ಅನ್ಯರ್ಥ ಸ್ಪಷ್ಟ. ಇದರ ಕೇಂದ್ರ ಪಾತ್ರ ಕ್ರಿಶ್ಚಿಯನ್, ವಾಸ್ತವವಾಗಿ `ಎಕ್ವಿರಿ ಮನ್, ಎಲ್ಲರ ಪ್ರತಿನಿಧಿ. ದಿ ಸಿಟಿ ಆಫ್ ಡಿಸ್ಟ್ರಕ್‍ಷನ್ ಐಹಿಕ ಜಗತ್ತು. ದಿ ಎವರ್ ಲಾಸ್ಟಿಂಗ್ ಸಿಟಿ, ಭಗವಂತನ ಸನ್ನಿಧಿ. ಪಾತ್ರಗಳ ಮತ್ತು ಸ್ಥಳಗಳ ಹೆಸರುಗಳೇ, ಅನ್ವರ್ಥನಾಮಗಳು-ಚ್ಯಾರಿಟಿ, ಡಿಸ್ವೇರ್, ಹಿಪಾಕ್ರಿಸಿ, ಗಲ್ಫ್ ಆಫ್ ಡೆ ಸ್ಯಾಂಡ್, ಮನೀಲರ್ ಇಂಥ ಹೆಸರುಗಳು. ನಾಯಕನ ಪ್ರಯಾಣದ ವಿವರಗಳು, ಪಾತ್ರಗಳೊಡನೆ ಸಂಭಾಷಣೆಗಳು ಎಲ್ಲ ಪರಿಣಾಮಕಾರಿ. ಅಮೂರ್ತ ಕಲ್ಪನೆಗಳು ಮೂರ್ತ ಸನ್ನಿವೇಶಗಳು ಜೀವಂತ ಪಾತ್ರಗಳು, ಎಲ್ಲವನ್ನು ಒಟ್ಟಿಗೆ ತರಬಲ್ಲ ವಿಶಿಷ್ಟ ಪ್ರತಿಭೆ ಇವನದು. ಇದು ಬಿಳುಪು, ಕಪ್ಪುಗಳ ಜಗತ್ತು; ಇವುಗಳ ನಡುವಣ ಛಾಯೆಗಳಿಗೆ ಅವಕಾಶವಿಲ್ಲ. ಈ ಕೃತಿ ಮುಂದಿನ ಕಾದಂಬರಿ ಯುಗದತ್ತ ದೃಷ್ಟಿ ಹಾಯಿಸಿದೆ.
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ